ತಾಮ್ಸನ್, ಕ್ರಿಶ್ಚನ್, ಯುರ್ಗೆನ್‍ಸೆನ್
1788-1865. ಡೆನ್ಮಾರ್ಕಿನ ಪುರಾತತ್ವಜ್ಞ. ಪುರಾತತ್ವದ ಅಧ್ಯಯನದ ಪ್ರಾರಂಭದ ಹಂತದಲ್ಲಿ ಆ ಶಾಸ್ತ್ರವನ್ನು ಸುಭದ್ರ ಬುನಾದಿಯ ಮೇಲೆ ನಿಲ್ಲುವಂತೆ ಮಾಡಿದ ಯುಗತ್ರಯ ವಿಧಾನದ (ತ್ರೀ ಏಜ್ ಸಿಸ್ಟಮ್) ಜನಕ. ಕೋಪೆನ್ ಹೇಗೆನ್ ನಗರದ ಐಶ್ವರ್ಯವಂತ ವ್ಯಾಪಾರಿಯೊಬ್ಬನ ಮಗನಾಗಿ 1788 ರ ಡಿಸೆಂಬರ್ 29 ರಂದು ಜನಿಸಿದ ತಾಮ್ಸನ್ ತನ್ನ ತಂದೆಯ ಮರಣಾನಂತರ ಅವನ ವ್ಯಾಪಾರ ಸಂಸ್ಥೆಯ ನಿರ್ವಾಹಕನಾಗಿ 1840 ರ ವರೆಗೆ ಅದರಲ್ಲಿ ಮುಂದುವರಿದನಾದರೂ ಸಣ್ಣ ವಯಸ್ಸಿನಿಂದಲೂ ಹಳೆಯ ನಾಣ್ಯಗಳ ಸಂಗ್ರಹದಲ್ಲಿ ಆಸಕ್ತಿ ಬೆಳೆಯಿಸಿಕೊಂಡಿದ್ದ. ಇದರಿಂದಾಗಿ ಪ್ರಾಕ್ತನಶಾಸ್ತ್ರದಲ್ಲೂ ಇವನಿಗೆ ಆಸ್ಥೆ ಉಂಟಾಯಿತು. ಕೋಪೆನ್ ಹೇಗೆನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಸ್ಮಸ್ ನೈರುಪ್ (1759 -1829) 1806 ರಲ್ಲಿ ಪ್ರಕಟಿಸಿದ ಓವರ್ಜಿನ್ ಓವರ್ ಫೆಡ್ರೆ ಲ್ಯಾಂಡೆಟ್ಸ್ ಮಿಂಡೆಸ್ಮೇರ್ಕರ್ ಫ್ರಾ ಓಲ್ಡ್ ಟಿಡೆನ್ ಗ್ರಂಥದಲ್ಲಿ ಡೆನಾರ್ಕಿನ ಪ್ರಾಚ್ಯ ವಸ್ತುಸಂಗ್ರಹಾಲಯದ ಸ್ಥಾಪನೆಯ ಅವಶ್ಯಕತೆಯನ್ನು ಪ್ರತಿಪಾದಿಸಿದ. ಹಲವಾರು ಮಂದಿಯಿಂದ ಸಂಗ್ರಹಿತವಾದ ಪ್ರಾಚ್ಯವಸ್ತುಗಳನ್ನು ವಿಧಿವತ್ತಾಗಿ ವರ್ಗೀಕರಿಸಿ, ಅವುಗಳಿಂದ ಇತಿಹಾಸ ಪೂರ್ವ ಸಂಸ್ಕøತಿಗಳ ಪರಿಚಯ ಮಾಡಿಕೊಳ್ಳುವುದು ಆತನ ಉದ್ದೇಶವಾಗಿತ್ತು. ಆದರೆ ಅವನ್ನು ಯಾವ ರೀತಿಯಲ್ಲಿ ವರ್ಗೀಕರಣ ಮಾಡಬೇಕೆಂಬುದು ಬಿಡಿಸಲಾಗದ ಸಮಸ್ಯೆಯಾಗಿತ್ತು. ನೈರುಪನ ಅಗ್ರಹಪೂರ್ವಕ ಪ್ರತಿಪಾದನೆಯಿಂದ ಕಾರ್ಯೋನ್ಮುಖವಾದ ಸರ್ಕಾರ 1807ರಲ್ಲಿ ರಾಷ್ಟೀಯ ಪ್ರಾಚ್ಯ ವಸ್ತು ಸಂಗ್ರಹಣೆ ಮತ್ತು ಸಂರಕ್ಷಣ ಸಮಿತಿಯನ್ನು ನೇಮಿಸಿತು. ಆ ಸಮಿತಿಗೆ ಒಂಬತ್ತು ವರ್ಷಕಾಲ ನೈರುಪ್ ಕಾರ್ಯದರ್ಶಿಯಾಗಿದ್ದ. ಆಗ ಅವನಿಗೂ ತಾಮ್ಸನನಿಗೂ ನಿಕಟ ಪರಿಚಯ ಬೆಳೆಯಿತು. ತಾಮ್ಸನನ ನಾಣ್ಯ ಸಂಗ್ರಹಣೆಯ ಆಸಕ್ತಿಯನ್ನು ಪ್ರಾಚ್ಯ ವಸ್ತುಗಳ ಕಡೆಗೆ ತಿರುಗಿಸಿದವನು ನೈರುಪ್. ರಾಷ್ಟೀಯ ಪ್ರಾಚ್ಯವನ್ನು ಸಂಗ್ರಹಣೆ ಮತ್ತು ಸಂರಕ್ಷಣ ಸಮಿತಿಗೆ 1816 ರಲ್ಲಿ ತಾಮ್ಸನ್ ಕಾರ್ಯದರ್ಶಿಯಾದ. ಅಲ್ಲದೆ ಆಗ ಸ್ಥಾಪಿತವಾದ ರಾಷ್ಟೀಯ ವಸ್ತು ಸಂಗ್ರಹಾಲಯದ ಪ್ರಥಮ ಕ್ಯೂರೇಟರ್ ಆಗಿ, ಸ್ವಲ್ಪಕಾಲದ ಅನಂತರ ಅದರ ಅಧ್ಯಕ್ಷನಾಗಿ ನೇಮಕವಾದ. 1865 ರ ಮೇ 21 ರಂದು ತೀರಿಕೊಳ್ಳುವ ವರೆಗೂ ಆ ಕಾರ್ಯ ನಿರ್ವಹಿಸಿದ. 

ಆ ವೇಳೆಗಾಗಲೇ ಅನೇಕ ಸಂಶೋಧಕ-ಸಂಗ್ರಾಹಕರ ಪರಿಶ್ರಮದಿಂದ ಅಪರಿಮಿತ ಸಂಖ್ಯೆಯಲ್ಲಿ ಒಟ್ಟುಗೂಡಿದ ಪ್ರಾಚ್ಯವಸ್ತುಗಳ ವರ್ಗೀಕರಣ ಕಾರ್ಯದಲ್ಲಿ ತಾಮ್ಸನ್ ಪೂರ್ಣ ಮಗ್ನನಾದ. ಬಹಳಷ್ಟು ಆಲೋಚನೆಯ ಅನಂತರ, ಪ್ರಾಚ್ಯ ವಸ್ತುಗಳ ತಯಾರಿಕೆಗೆ ಬಳಸಲಾದ ಸಾಮಗ್ರಿಗಳ ಆಧಾರದ ಮೇಲೆ ಅವನ್ನು ಶಿಲಾಯುಗ, ಕಂಚಿನಯುಗ ಮತ್ತು ಕಬ್ಬಿಣಯುಗಗಳ ಅವಶೇಷಗಳೆಂದು ವಿಂಗಡಿಸಲಾಯಿತು. ಈ ನಿಯಮಕ್ಕೆ ಅನುಸಾರವಾಗಿ ಪ್ರಾಚ್ಯವಸ್ತುಗಳನ್ನು ಜೋಡಿಸಿ ಸಂಗ್ರಹಾಲಯವನ್ನು 1819 ರಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ತೆರೆಯಲಾಯ್ತು. ಅದು ವಿಶ್ವದಲ್ಲೆ ಈ ರೀತಿ ವ್ಯವಸ್ಥಗೊಂಡ ಪ್ರಥಮ ವಸ್ತು ಸಂಗ್ರಹಾಲಯ. ತನ್ನ ವ್ಯಾಪಾರನಿರ್ವಹಣೆಯ ಒತ್ತಡವಿದ್ದರೂ ಸಂಗ್ರಹಾಲಯಕ್ಕೆ ಬಂದ ಪ್ರೇಕ್ಷಕರಿಗೆ ತಾಮ್ಸನ್ ಸ್ವತಃ ವಿವರಣೆ ನೀಡುತ್ತಿದ್ದ. ಅದರಲ್ಲೂ ಗ್ರಾಮ ಪ್ರದೇಶಗಳ ರೈತ ಜನರಿಗೆ ಹೆಚ್ಚಿನ ಗಮನ ನೀಡುತ್ತಿದ್ದ. ಏಕೆಂದರೆ ಪ್ರಾಚ್ಯ ಅವಶೇಷಗಳು ಆ ಪ್ರದೇಶಗಳಲ್ಲಿ ಹೆಚ್ಚಾದ್ದರಿಂದ ಅವುಗಳ ಸಂಗ್ರಹಣೆಯ ಕಾರ್ಯದಲ್ಲಿ ರೈತಜನರ ಪಾತ್ರ ಹಿರಿದೆಂದು ಅವನು ತಿಳಿದಿದ್ದ. 1836 ರಲ್ಲಿ ತನ್ನ ಸಂಗ್ರಹಾಲಯದಲ್ಲಿ ಶೇಖರವಾದ ವಸ್ತುಗಳನ್ನು ವಿವರಿಸುವ ಲೇಡರ್‍ಟ್ರಾಡ್ ಟೆಲ್‍ನಾರ್ಡಿಸ್ಕ್ ಓಲ್ಡ್ ಕಿಂಡಿಫೆಡ್ ಎಂಬ ಕೈಪಿಡಿಯನ್ನು ಪ್ರಕಟಿಸಿದ. ಅದರ ಇಂಗ್ಲಿಷ್ ಆವೃತ್ತಿಯನ್ನು ಲಾರ್ಡ್ ಎಲ್ಸ್ ಮೀರ್ 1848ರಲ್ಲಿ ಪ್ರಕಟಿಸಿದ. ಆ ಗ್ರಂಥದಲ್ಲಿ ಉತ್ತರ ಯೂರೋಪಿನ ಪುರಾತನ ಕಟ್ಟಡಗಳ ಮತ್ತು ಪ್ರಾಚ್ಯವಸ್ತುಗಳ ವಿಭಾಗವನ್ನು ಔತ್ತರೇಯ ಪ್ರಾಚ್ಯವನ್ನು ಅನ್ವೇಷಕ ಸಮಿತಿಯ ಸದಸ್ಯರ ನೆರವಿನಿಂದ ತಾಮ್ಸನ್ ರಚಿಸಿದ್ದಾನೆ. ಅದರಲ್ಲಿ ಯುರತ್ರಯ ವಿಧಾನದ ಬಗ್ಗೆ ದೀರ್ಘ ವಿವರಣೆ ನೀಡಿ ಆ ವಿಧಾನದ ಅವಶ್ಯಕತೆಯನ್ನು ಎತ್ತಿ ತೋರಿಸಿದ್ದಾನೆ. ಆದಿಕಾಲದಲ್ಲಿ ಲೋಹಗಳ ಬಳಕೆ ರೂಢಿಗೆ ಬರುವ ಮುನ್ನ ಮಾನವ ತನ್ನ ಆಯುಧೋಪಕರಣಗಳನ್ನು ಕಲ್ಲು, ಮೂಳೆ ಮತ್ತು ಮರಗಳಿಂದ ತಯಾರಿಸುತ್ತಿದ್ದನೆಂದೂ ಮೂಳೆ ಮತ್ತು ಮರದ ವಸ್ತುಗಳು ವಾತಾವರಣದ ಪ್ರಭಾವದಿಂದ ಬೇಗ ನಾಶವಾಗುತ್ತಿದ್ದುದರಿಂದ ಕಲ್ಲಿನ ಆಯುಧಗಳು ಉಳಿದುಬಂದಿವೆಯೆಂದೂ ಆದುದರಿಂದ ಆ ಅವಧಿಯನ್ನು ಶಿಲಾಯುಗವೆಂದು ಕರೆಯುವುದು ಸೂಕ್ತವೆಂದೂ ತಿಳಿಸಿದ್ದಾನೆ. ಲೋಹಗಳ ಬಳಕೆ ಪ್ರಾರಂಭವಾದ ಸಮಯದಲ್ಲಿ ಕಂಚು ಹೆಚ್ಚಾಗಿ ಬಳಕೆಯಲ್ಲಿದ್ದುದರಿಂದ ಆ ಅವಧಿಯನ್ನು ಕಂಚಿನ ಯುಗವೆಂದು ಹೆಸರಿಸಿದ್ದಾನೆ. ಅನಂತರದ ಕಾಲದಲ್ಲಿ ಕಬ್ಬಿಣದ ಲೋಹಗಾರಿಕೆಯನ್ನು ಸಾಧಿಸಿಕೊಂಡು ಆಯುಧೋಪಕರಣಗಳನ್ನು ಆ ಲೋಹದಿಂದ ತಯಾರಿಸುತ್ತಿದ್ದುದರಿಂದ ಆ ಅವಧಿಯನ್ನು ಕಬ್ಬಿಣದ ಯುಗವೆಂದು ಕರೆದಿದ್ದಾನೆ. ಯುಗತ್ರಯ ವಿಧಾನದಿಂದ ಪುರಾತತ್ವಶಾಸ್ತ್ರಕ್ಕೆ ಒಂದು ಭದ್ರಬುನಾದಿಯನ್ನು ಒದಗಿಸಿದಂತಾಗಿದೆ. ಮತ್ತೆ ವಿವಿಧ ಸಂಸ್ಕøತಿಗಳ ನಿರ್ದಿಷ್ಟ ಅವಧಿಗಳನ್ನು ತಿಳಿಯಲು ಈ ವಿಧಾನದಿಂದ ಸಾಧ್ಯವಿಲ್ಲವಾದರೂ ಅವುಗಳ ಅನುಕ್ರಮ ಪ್ರಾಚೀನತೆ ತಿಳಿದುಬರುತ್ತದೆ. ತಾಮ್ಸನನ ಅನಂತರ ಬಂದ ಪುರಾತತ್ವ ಸಂಶೋಧಕರು ಈ ವಿಭಜನೆಗೆ ಕೆಲವು ಹೊಸ ಉಪ ವಿಭಾಗಗಳನ್ನು ಸೇರಿಸಿದ್ದರೂ ತಾಮ್ಸನನ ವಿಭಜನೆಯ ಚೌಕಟ್ಟು ಹಾಗೆಯೇ ಉಳಿದುಬಂದಿರುವುದು ಅದರ ಮೌಲಿಕ ಉಪಯುಕ್ತತೆಯನ್ನು ತೋರಿಸಿಕೊಡುತ್ತದೆ. ಶಿಲಾಯುಗವನ್ನು ಪೂರ್ವಶಿಲಾಯುಗ, ಮಧ್ಯಶಿಲಾಯುಗ, ಅಂತ್ಯಶಿಲಾಯುಗ, ಸೂಕ್ಷ್ಮ ಶಿಲಾಯುಗ ಮತ್ತು ನವಶಿಲಾಯುಗಗಳೆಂದು ವಿಭಾಗಿಸಿರುವುದನ್ನು ಇಲ್ಲಿ ಉದಾಹರಿಸಬಹುದು.

ತಾಮ್ಸನ್ನನ ಈ ವಿಧಾನವನ್ನು ವಿಸ್ತøತವಾಗಿ ರೂಢಿಸಿಕೊಂಡ ಅವನ ಶಿಷ್ಯವರ್ಗದಲ್ಲಿ ಕೋಪೆನ್ ಹೇಗೆನ್ ವಿಶ್ವವಿದ್ಯಾಲಯದ ನ್ಯಾಯಶಾಸ್ತ್ರ ವಿದ್ಯಾರ್ಥಿ ಯೆನ್ಸ್ ಯೇಕಬ್ ಅಸ್ಮುಸ್ಸೆನ್ ವುರ್ಸಾಯೆ (1821-1885) ಮುಖ್ಯ. ಇವನು ತಾಮ್ಸನ್ನನ ತರುವಾಯ ರಾಷ್ಟೀಯ ವಸ್ತುಸಂಗ್ರಹಾಲಯದ ನಿರ್ದೇಶಕನೂ ವಿಶ್ವವಿದ್ಯಾಲಯದಲ್ಲಿ ಪುರಾತತ್ವ ವಿಭಾಗದ ಪ್ರಾಧ್ಯಾಪಕನೂ ಆಗಿದ್ದ. ಇವನನ್ನು ವಿಶ್ವದ ಪ್ರಥಮ ವೃತ್ತಿನಿರತ ಪುರಾತತಜ್ಞನೆಂದು ಕರೆಯಲಾಗಿದೆ. ಇವನು ತನ್ನ ವೃತ್ತಿ ಸಾಧನೆಗಾಗಿ ದೇವಲೋಕವನ್ನೇ ಅಲ್ಲಾಡಿಸುವ ಸಾಮಥ್ರ್ಯ ಉಳ್ಳವನೆಂದು ತಾಮ್ಸನ್ ಅವನನ್ನು ವರ್ಣಿಸಿದ್ದಾನೆ. ತಾಮ್ಸನ್ ತನ್ನ ವಸ್ತು ಸಂಗ್ರಹಾಲಯದ ಅವಶೇಷಗಳನ್ನು ವ್ಯವಸ್ಥೆಗೊಳಿಸಿದರೆ ಅವನ ಶಿಷ್ಯ ಇಡೀ ದೇಶದ ಪ್ರಾಚ್ಯ ವಸ್ತುಗಳ ಸುವ್ಯವಸ್ಥೆಗೆ ಶ್ರಮಿಸಿ ತನ್ನ ಗುರುವನ್ನೇ ಮೀರಿಸಿದ. ತಾಮ್ಸನ್ ವಿಧಾನದ ಮತ್ತೊಬ್ಬ ಅನುಯಾಯಿ ಸೈನ್ ನಿಲ್ಸನ್ (1787-1883). ಯುಗತ್ರಯ ವಿಧಾನವನ್ನು ಇವನು ಹೆಚ್ಚು ವಿಶದೀಕರಿಸಿದ. ಆದಿ ಮಾನವನ ವಿಕಾಸದಲ್ಲಿ ಈ ಮೂರು ಯುಗಗಳು ಆರ್ಥಿಕ ಪ್ರಗತಿಯನ್ನು ನಿರೂಪಿಸುತ್ತವೆಂಬ ಅಂಶವನ್ನು ಇವನು ತನ್ನ ಸ್ಕಾಂಡಿನೇವಿಸ್ಕ ನಾರ್ಡೆನ್ಸ್ ಉರಿನ್‍ವನರ (1838-43) ಎಂಬ ಗ್ರಂಥದಲ್ಲಿ ಪ್ರತಿಪಾದಿಸಿದ್ದಾನೆ.

ಬಫ್ಫನ್ (1707-88) ಇರಾಸ್ಮಸ್ ಡಾರ್ವಿನ್ (1731-82) ಲಮಾರ್ಕ್ (1744-1820) ಮುಂತಾದ ವಿದ್ವಾಂಸರು ಜೀವವಿಕಾಸ ಶಾಸ್ತ್ರದ ಅಧ್ಯಯನದಲ್ಲಿ ಪ್ರತಿಪಾದಿಸಿದ ವಂಶಪರಿವರ್ತನ ವಾದವನ್ನು ಮಾನವ ಸಂಸ್ಕøತಿಗಳ ಇತಿಹಾಸಕ್ಕೆ ಮೊದಲ ಬಾರಿಗೆ ಅಳವಡಿಸಿಕೊಂಡವರು ತಾಮ್ಸನ್ ಮತ್ತು ಅವನ ಶಿಷ್ಯರು. ಪುರಾತತ್ವವನ್ನು ಅನಿಶ್ಚಿಯತೆಯ ಮಸಕಿನಿಂದ ವೈಜ್ಞಾನಿಕ ಸತ್ಯದ ಹಂತಕ್ಕೆ ತಂದ ಪ್ರಮುಖ ಆದ್ಯಪ್ರವರ್ತಕರಲ್ಲಿ ತಾಮ್ಸನ್ ಒಬ್ಬ.						(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ